`ಉರ್ದು ಕವಿ ಸಾಹಿರ್ ಹೇಳಿದ ಹಾಗೆ `ಗಮ್ ಔರ್ ಭಿ ಹೈ, ದುನಿಯಾಮೆ ಮೊಹಬ್ಬತ್ ಕೆ ಸಿವಾ'. ನಿಮ್ಮ ಕವಿತೆಗಳು ಲೈಂಗಿಕತೆಯನ್ನೇ ಬಂಡವಾಳ ಮಾಡಿಕೊಳ್ಳದೆ ಲೋಕದ ಎಲ್ಲಾ ದಂದುಗಗಳ ಬಗ್ಗೆ ಕಾಳಜಿ ಹೊಂದಿ ವಿಶೇಷವಾದ ವ್ಯಾಪಕತೆ ಪಡೆದುಕೊಂಡಿವೆ...' ಹೀಗಂತ ಎಚ್.ಎಸ್.ಶಿವಪ್ರಕಾಶ್ ಆರಿಫ್ ರಾಜಾರ ಮೊದಲ ಸಂಕಲನದಲ್ಲಿ ಬರೆದಿದ್ದಾರೆ.ತೀವ್ರ, ಆದ್ರ್ರ, ಭಾವಪೂರ್ಣ, ಮಾನವೀಯ ಕವಿತೆಗಳನ್ನು `ಜಂಗಮ ಫಕೀರನ ಜೋಳಿಗೆ' ತುಂಬ ತುಂಬಿಕೊಂಡು ನಮ್ಮ ನಡುವೆ ನಿಂತಿರುವ ಕವಿ ಆರಿಫ್ ರಾಜಾ. ರಾಯಚೂರು ಸಮೀಪದ ಗ್ರಾಮವೊಂದರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪಾಠ ಮಾಡುತ್ತಾ ಮಗುವಿನ ಬೆರಗು ಕಣ್ಣನ್ನು, ಗಾಢವಾದ ಭಾವ ಹೊಂದಿದ ಕವಿ.ಸಂಕಲನ ಮೊದಲನೆಯದ್ದೇ ಆದರೂ ರಾಜ್ಯದ ಹಲವು ಪತ್ರಿಕೆಗಳಲ್ಲಿ ಪ್ರಕಟವಾದ ಕವಿತೆಗಳು ಇದರಲ್ಲಿವೆ, ಸಾಕಷ್ಟು ಮೆಚ್ಚಿಸಿಕೊಂಡಿವೆ. ಬಹುಮಾನ, ಅಭಿಮಾನಗಳನ್ನು ಪಡೆದುಕೊಂಡಿವೆ. ಬದುಕು-ಬರಹ `ಜೀವವಿರೋಧಿ'ಯಾಗಬಾರದೆಂದು ಹಂಬಲಿಸುವ ಈ ಕವಿಯ ಮಾತಿನ ಜೋಳಿಗೆ ಬಿಚ್ಚಿಸಿ ಕೂತಾಗ...
ನೀವು ಕವಿತೆಯ ಕೈ ಹಿಡಿದಿರಾ? ಅಥವಾ ಕವಿತೆ ನಿಮ್ಮನ್ನು ಮಡಿಲಿಗೆ ಹಾಕಿಕೊಂಡಿತಾ?
keep a green tree in your heart, singing bird will surely come ಅಂತಾ ಒಂದು ಚೀನಿ ಗಾದೆ. ನನ್ನದೇ ಕವಿತೆಯ ಸಾಲುಗಳಲ್ಲಿ ಹೇಳುವುದಾದರೆ,
ನಾನಾಗ ಕವಿತೆ ಬರೆಯುತ್ತಿದ್ದೆ
ಕವಿತೆ ನನ್ನಿಂದ ಬರೆಯಿಸಿಕೊಳ್ಳುತ್ತಿದೆ.
ಕವಿತೆಯ ಸಖ್ಯ ಯಾಕೆ ಬೇಕು?
ನೀವು ಕೇಳಿದ ಪ್ರಶ್ನೆಯಷ್ಟೇ ನೇರವಾಗಿ, ಸರಳವಾಗಿ ಉತ್ತರಿಸುವುದು ಕಷ್ಟ. ಜಗದ ಮೊದಲ ಹಾಡು ಹೇಗೆ ಹುಟ್ಟಿತು? ಗುಡ್ಡ ಗಾಡುಗಳಲ್ಲಿ ಬೇಟೆಯಾಡಿಕೊಂಡು, ತನ್ನಷ್ಟಕ್ಕೆ ತಾನಿದ್ದ ಮನುಷ್ಯ ಗುಹೆಗಳಲ್ಲಿ ಯಾಕೆ ಚಿತ್ರ ಬರೆಯುವ ಸಾಹಸ ಮಾಡಿದ? ಇದನ್ನು ಸೃಜನಶೀಲತೆ ಎಂದು ಯಾಕೆ ಕರೆದೆವು? ಗುರುತರವಾದ ಬೆರಗೊಂದು ಕಾಲನ ಕೈಯಿಂದ ಜಾರಿ ಶಾಶ್ವತ ನೆನಪಾಗುಳಿಯುವುದನ್ನು ಮನುಷ್ಯ ಸಹಿಸಲಾರ ಎನಿಸುತ್ತದೆ. ಅದಕ್ಕೆ ಈ ಕಲೆ ಕವಿತೆ. ಹಾಗಾಗಿ ಈ ಪ್ರಶ್ನೆಗೆ ಸಾಮುದಾಯಿಕ ನೆಲೆಯಲ್ಲೇ ಉತ್ತರ ಹುಡುಕಬೇಕು ಅನ್ನಿಸುತ್ತೆ.
ಸಾತ್ವಿಕ ಆಕ್ರೋಶ, ಬಿಸಿ ರಕ್ತದ ಸಿಡುಕು, ಅದಮ್ಯ ಪ್ರೇಮ ನಿಮ್ಮ ಕವಿತೆಯಲ್ಲಿವೆ. ಕಾವ್ಯ ಖಡ್ಗ ಆಗಬೇಕು ಅನ್ನಿಸುತ್ತಾ? ತತ್ವದ ಬೆಳಕಾಗಬೇಕು ಅನ್ನಿಸುತ್ತಾ?
ನಾನೊಬ್ಬ ಮನುಷ್ಯ ಎಂದ ಮೇಲೆ ಎಲ್ಲರ ಹಾಗೆ ಬಲ-ಬಲಹೀನತೆಗಳು ಸಹಜವಾಗಿ ನನ್ನ ಬರವಣಿಗೆಯಲ್ಲಿ ಬರಬೇಕು. ಸಂಕೀರ್ಣ ಸನ್ನಿವೇಶದಲ್ಲಿ ಮಾನವ ವರ್ತನೆಯನ್ನು ಇದು ತಪ್ಪು-ಸರಿ, ಇದು ಹಿಂಸೆ, ಇದು ಅಹಿಂಸೆ, ನೈತಿಕ-ಅನೈತಿಕ ಎಂದು ಕಪ್ಪು -ಬಿಳುಪಾಗಿ ವಿಶ್ಲೇಷಣೆ ಮಾಡಲು ಆಗುವುದಿಲ್ಲ. ಖಡ್ಗಕ್ಕೊಂದು ತಾತ್ವಿಕತೆ ಇಲ್ಲ ಅನ್ನುತ್ತೀರಾ?
ಮಂದಿರ, ಮಸೀದಿ, ಬದಲು ತಾಜ್ಮಹಲ್ ಕಟ್ಟಬೇಕೆನ್ನುತ್ತೀರಿ. ನಿಮ್ಮ ಕವಿತೆಗಳಲ್ಲಿ ಹೀಗೆ ಕಾಣಿಸಿಕೊಳ್ಳುವ ಪ್ರೇಮ ಎಂಥದ್ದು ಅನ್ನೋ ಕುತುಹೂಲ..
ಹೌದು, ತಾಜ್ಮಹಲ್ ಕಟ್ಟಬೇಕು. ಯಾರದ್ದೋ ಗೋರಿಯ ಮೇಲಲ್ಲ. ಸಂಬಂಧಗಳಲ್ಲಿ ಸೌಹಾರ್ದತೆಯನ್ನು ಬೆಳೆಸುವ ಸೇತುವೆಯಾಗಿ. ನನ್ನ ಕವಿತೆಗಳಲ್ಲಿ ಕಾಣುವ ಪ್ರೇಮ ಅಂದರೆ ಜೀವನ ಪ್ರೇಮ, ಯಾವ ದೇಶದಲ್ಲೇ ಆಗಲಿ, ಯಾವ ಕಾಲದಲ್ಲೇ ಆಗಲಿ ಇದೊಂದು ಮಾತ್ರ ಅವಮಾನವೀಯವಾಗಿರಲು ಸಾಧ್ಯವಿಲ್ಲವಲ್ಲ. ಅಂಥ ಪ್ರೇಮ ಇಲ್ಲಿದೆ. ಸಾಂಸ್ಕೃತಿಕ ಚಹರೆಗಳು, ಈ ವಿಷಯದಲ್ಲಿ ಕೇವಲ ಹೊರಹೊದಿಕೆಗಳು ಮಾತ್ರ...
ನಿಮ್ಮ ಕವಿತೆಗಳಲ್ಲಿ ನಿಮಗೆ ಇಷ್ಟವಾದ ಸಾಲುಗಳು
..ಜಂಗಮ ಫಕೀರನ ಜೋಳಿಗೆ ಪದ್ಯದ...
ನಿನ್ನ ಯುಗಾದಿಯ ಬೇವು ಬೆಲ್ಲ
ನನ್ನ ರಮ್ಜಾನಿನ ದೂದ್ ಖುರ್ಮಾ
ಎಂದೂ ಒಂದಾಗುವುದಿಲ್ಲ.
ಈ ಹುಡುಗರಿಗೆ ಮತ್ತೆ
ರಕ್ತದಲ್ಲಿ ಪ್ರೇಮಪತ್ರ ಬರೆವ ಹುಚ್ಚು
ನಿಮ್ಮನ್ನು ಪ್ರಭಾವಿಸಿದ್ದು ಯಾರು?
ಎಚ್.ಎಸ್. ಶಿವಪ್ರಕಾಶ್. ಮಾದರಿಗಳೇ ಇಲ್ಲದ ಹೊತ್ತಲ್ಲಿ ಹೊಸ ನಡೆ ಕಂಡುಕೊಂಡವರು, ದೊಡ್ಡ ಸಾಧನೆ ಮಾಡಿದವರು ಶಿವಪ್ರಕಾಶ್. ಹಾಗೆಯೇ ಭಿನ್ನ ನೆಲೆಯಲ್ಲಿ ನಡೆದ ಎಸ್.ಮಂಜುನಾಥ್.
ನಿಮ್ಮ ವಾರಿಗೆಯ ಕವಿಗಳ ಬಗ್ಗೆ ಹೇಳಿ..
ಖುಷಿ ಇದೆ. ಇವತ್ತಿನ ಬರಹಗಾರರು ತಮ್ಮ ಮಿತಿಯೊಳಗೆ ಪ್ರಾಮಾಣಿಕವಾಗಿದ್ದಾರೆ. ಮೈಗೆ ಬೆಂಕಿ ಹಚ್ಚಿಕೊಂಡು ಬರೆಯುತ್ತಾರೆ. ರಕ್ತ ಸುಟ್ಟುಕೊಳ್ಳುತ್ತಾರೆ. ಇಂಥವರು ಎಂದು ಹೆಸರು ಹೇಳುವುದರಲ್ಲೇನಿದೆ. ನಿಜವಾದ ಓದುಗನಿಗೆ ಅವರ್ಯಾರು ಗೊತ್ತಾಗುತ್ತೆ..
ವಾರಿಗೆಯ ಕವಿಗಳಲ್ಲಿ ನೀವು ಸ್ನೇಹಿತನಾಗಿ ಏನನ್ನಾದರೂ ಹೇಳಿಕೊಳ್ಳಲೇಬೇಕು ಅನ್ನಿಸಿದ ಸಂಗತಿ..
ನಾವೆಲ್ಲಾ ಮಾತಿಗಿಂತಲೂ ಕ್ರಿಯೆ ಮುಖ್ಯ ಅನ್ನೋ ಎಚ್ಚರ ಸದಾ ನೆನಪಿನಲ್ಲಿಟ್ಟುಕೊಂಡರೆ ಸಾಕು. ಬರಹಗಾರನಿಗೆ ಮುದ್ರಣ, ದೃಶ್ಯ ಮಾಧ್ಯಗಳಲ್ಲಿ ಇಂದು ತುಂಬಾ ಅವಕಾಶಗಳಿವೆ. ಯಾವುದೇ ಅವಕಾಶ ಲೇಖಕನನ್ನು ಬೆಳೆಸಬೇಕು. ಆದರೆ ಅವನನ್ನು ಅವಕಾಶವಾದಿಯನ್ನಾಗಿ ಮಾಡಿ ವಾಚಾಳಿಯಾಗಿಸಬಾರದು. ಇಂಥ ಅವಕಾಶಗಳ ಬಗ್ಗೆ ಎಚ್ಚರವಹಿಸಬೇಕು ಎನ್ನುವುದು ನನ್ನ ಭಿನ್ನಹ.
ಮತ್ತೇನು ಬರೆಯಬೇಕೆಂದಿದ್ದೀರಿ?
ನಾಟಕ ಬರೀಬೇಕು ಅಂತಿದ್ದೀನಿ. ನಾವು ಮುಖ್ಯವಾಹಿನಿ ಅಂದುಕೊಂಡ ಪಠ್ಯಗಳಲ್ಲಿ ದಾಖಲಾಗದೆ ಉಳಿದ ಪ್ರತಿ ಇತಿಹಾಸ, ಹಾಲು ಜೇನಿನಂತೆ ಬೆರೆತು ಹೋಗಿದ್ದ ಸೂಫಿ-ಶರಣ ತತ್ವಗಳು, ಮೊನ್ನೆ ತಾನೇ ರಾಜಧಾನಿಯಲ್ಲಿ 60 ಸಾವಿರ ಭಿಕ್ಷುಕರನ್ನು ಪ್ರಾಣಿಗಳಂತೆ ಹೊರಹಾಕಿದ್ದು, ದಿಲ್ಲಿ ಬಜಾರು, ದಿಲ್ಲಿ ದರ್ಬಾರು ಇದೆಲ್ಲವೂ ನಾಟಕದಲ್ಲಿ ಇರುತ್ತವೆ..

2 ಹೀಗಂತಾರೆ:

ಅನಾಮಧೇಯ ಹೇಳಿದರು... 11:16 PM  

ನಮಸ್ತೇ
ನಿಮ್ಮ ಬ್ಲಾಗ್ ಮೊದಲಿನಿಂದಲೂ ಮೆಚ್ಚಿನ ಓದಿಗೆ ತಾಣವಾಗಿದೆ. ನೀವು ಹೊಸ ತಲೆಮಾರಿನ ಬರಹಗಾರರ ಬಗ್ಗೆ ಬರೆಯುತ್ತಿರೋದು ಖುಷಿಯ ಸಂಗತಿ. ಪ್ರತಿಬಾರಿಯೂ ನೀವು ಈ ಬಗೆಯ ಹೊಸ ಲೇಖನವನ್ನ ಹಾಕಿದಾಗ ‘ಹೊಸತಲೆಮಾರು’ ಬ್ಲಾಗ್ ನಲ್ಲಿ ಲಿಂಕ್ ಹಾಕ್ತೇನೆ. ನಿಮ್ಮ ಸಮ್ಮತಿಯಿದ್ದರೆ ಇಡಿಯ ಲೇಖನವನ್ನ ಕಾಪಿ ಮಾಡಿ ಹಾಕುವ ಇರಾದೆಯಿದೆ. ಒಟ್ಟಿನಲ್ಲಿ, ಸಾಧ್ಯವಾದಷ್ಟು ಓದುಗರಿಗೆ ಇದು ತಲುಪಬೇಕೆನ್ನುವುದಷ್ಟೆ ಉದ್ದೇಶ.
ನಲ್ಮೆ,
ಟೀಮ್ ಹೊಸ ತಲೆಮಾರು

ತೀವ್ರವಾಗಿ ತಾಗುವ ಕಾವ್ಯ...
ಕವಿಯ ನಿಲುವುಗಳೂ, ಸಲಹೆಗಳೂ ಸಹ ಪರಿಣಾಮಕಾರಿಯಾಗಿವೆ...

ಮಹಾತ್ಮ

ಮಹಾತ್ಮ

ಹುಡುಕೋಕೆ..

ಲೋಡ್ ಆಗುತ್ತಿದೆ...

About this blog


ಒಳಗೂ.. ಹೊರಗೂ ಎಂದ ಮೇಲೆ ಇನ್ನೇನು ಹೇಳಬೇಕು. ಹೊರಗಿನಿಂದಕ್ಕೆ ಸ್ಪಂದಿಸುವ ಒಳಗನ್ನೂ.. ಒಳಗಿನ ಮಾತನ್ನು ಕೇಳುತ್ತಾ ಹೊರಗಿನ ಜೊತೆ ನಡೆಯುವುದನ್ನೂ. ಮಾಡುತ್ತಲೇ ಇರುತ್ತೇವೆ. ತಪ್ಪು ಸರಿಗಳ ವಿವೇಚನೆ ಗೊತ್ತಿದ್ದು, ಗೊತ್ತಿಲ್ಲದೆ, ಕಲಿತು, ಮರೆತು ಬದುಕುತ್ತಲೇ ಇರುತ್ತೇವೆ. ಅವುಗಳ ಬಗ್ಗೆ ಒಮ್ಮೆ ಸಮಾಧಾನಕ್ಕೆ, ಖುಷಿಗೆ, ಓದಿದವರು ಇಷ್ಟಪಡುತ್ತಾರೆ ಎಂಬ ಕಾರಣಕ್ಕೆ, ಬರೆಯುವ ಮತ್ತು ಓದುವ ಕಾಲದಲ್ಲೇ ಹೊಳೆದು ಬಿಡಬಹುದಾದ ಸಂಗತಿಗಳಿಗಾಗಿ.. ಬರೆಯುವ ಹಟ ಮತ್ತು ಚಟ.ಥೇಟ್ ಕೆರೆ-ದಡದ ಆಟ. ನೆಟ್ಟಿರಲಿ ಇಲ್ಲಿ ನಿಮ್ಮ ನೋಟ....

ಬ್ಲಾಗ್ ಆರ್ಕೈವ್