ಇಲ್ಲಿ ಕವಿತೆಗಳನ್ನು ಬರೆಯಬಾರದು ಅಂದುಕೊಂಡಿದ್ದೆ. ಆದರೆ.. ಕಳೆದ ಐದಾರು ವರ್ಷಗಳಿಂದ ಅಕ್ಷರಗಳ ಜೊತೆಗೆ ಇದ್ದೂ ಬಿಡಿ ಬಿಡಿ ಬರಹಗಳನ್ನು ಬರೆದುಕೊಂಡಿದ್ದೂ... ನನಗೆ ನನ್ನದೇ ಅಭಿವ್ಯಕ್ತಿಯ ಮಾಧ್ಯಮ- ಕತೆಯೋ, ಕವಿತೆಯೊ- ಯಾವುದೆಂದು ಸ್ಪಷ್ಟವಾಗದೆ.. ಹೀಗೆ ಕಳೆದು ಬಿಟ್ಟೆ. ಒತ್ತಡದ, ವ್ಯವಧಾನವಿಲ್ಲದ ಈ ಹೊತ್ತಲ್ಲಿ ಅಸಂಗತವಾಗಿ ಹೊಳೆಯುವ ಹಲವು ಕ್ಷಣಗಳು ಈಗ ಕವಿತೆಗಳಾಗುತ್ತಿವೆ. ಇದೇ ನನ್ನ ಅಭಿವ್ಯಕ್ತಿಯ ಮಾಧ್ಯಮವೆ? ಗೊತ್ತಿಲ್ಲ.
ಕಳೆದ ಕೆಲವು ದಿನಗಳಿಂದ ಮಿಂಚಿದ ಹಲವು ಸಾಲುಗಳಲ್ಲಿ ಆರೇಳು ಆರಿಸಿ ಇಲ್ಲಿ ಹಾಕಿದ್ದೀನಿ...
ಹೆಗಲ ಮುಟ್ಟಿದ ನೆರಳು
ನಿನ್ನ ಮುಟ್ಟಿದ ಬೆರಳು
ನಾಳೆಗೆ ಚಿಗುರುತ್ತದೆ.
*
ನನ್ನ ಬೆನ್ನ ಮೇಲೆ
ನೀನು ಯಾವ ಚಿತ್ರ
ಬರೆದಿದ್ದೆ?
ಮಿಸುಕಾಡುತ್ತಿದ್ದೆ,
ಯಾವ ಬಣ್ಣ ಹಾಕಿದ್ದೆ?
*
ಹೇಳದೆ ಉಳಿವ ಮಾತುಗಳು
ಹಿಗ್ಗುತ್ತಿವೆ ಜಗದಗಲ
ನಿನ್ನನ್ನೂ ಮುಟ್ಟಬಹುದು
ಕಾದು ನೋಡು...
ಕರಗಿದರೆ ಮಳೆಯಾಗಿ
ಚೆಲ್ಲಿದರೆ ಗಾಳಿಯಾಗಿ
ಒಸರಿಸಿದರೆ ಬಿಸಿಲಾಗಿ
ಮುಟ್ಟಬಹುದು...
ಯಾವ ಕಾವಿಗೆ ಕಾದ
ಮೊಟ್ಟೆಗಳೊ
ಮರಿಯಾಗಬೇಕಿವೆ.
*
ಇಲ್ಲೊಂದು ಪುಳಕದ ಝರಿ
ಇನ್ನು ಮೊರೆತ...
*
ನಡುರಾತ್ರಿಯ
ನಮ್ಮ ಮಾತು
ಕದ್ದು ಕೇಳುವರಾರು,
ಕೇಳಿದರೂ ಕೇಳಬಹುದು
ಕನಸುಗಳು
ಹೊಸ ಭಾವಕ್ಕಾಗಿ
ಹೊಸ ರೂಪಕ್ಕಾಗಿ
ಹುಚ್ಚು ಮನದ
ರಚ್ಚೆ ಹಿಡಿದ ಮಾತು
ಮೊರೆಯಲಿ ಬಿಡು,
ಜಗಕೆ ನಮ್ಮ ಚಿಂತೆಯಿಲ್ಲ
ನಮಗದರ ಗೊಡವೆ ಬೇಕಿಲ್ಲ.
*
ಕಿಡಿಯಂತೆ ಸುಡುವ
ಪಟಪಟನೆ ಒದ್ದಾಡುವ
ನನ್ನ ಹೊಕ್ಕಳ ಸುಳಿಗೆ
ನಿನ್ನ ಬೆರಳೇ ಉತ್ತರ.
*
ಈ ಸಂಜೆ
ನೀನು
ಟೀ
ಸಿಗರೇಟು
ಸಿಗುವ ಖುಷಿಯಷ್ಟೆ
ನಾನು..
*
ನನ್ನೆದೆ ಬಿಸುಪು
ಎಲ್ಲ ಬೇಸರವನು
ಕರಗಿಸಲಿ
ಕಣ್ಣ ರೆಪ್ಪೆಯಲಿ
ಕನಸ ಕಸರೂ ಬೇಡ
ರಾತ್ರಿ ನಿನ್ನದಾಗಲಿ
*
ಸಂಭ್ರಮದಲಿ ಒಂಟಿಯಾಗುವುದು
ಒಂಟಿತನವ ಸಂಭ್ರಮಿಸುವುದು
ಯಾಕೆಂದು ನೀನೇ
ಹೇಳು...
*
ಹೋಗು ಹೋಗು ಸುಮ್ಮನೆ
ಬೆಳದಿಂಗಳ ಮಾತು
ಹೆಗಲ ಮೇಲೆ ನೀನಿಟ್ಟ ಚಿಟ್ಟೆ
ಹಾರಿ ಹೋಗಿದೆ,
ಕೈಯಲ್ಲಿಟ್ಟ ಹೋದ
ಚಂದ್ರನ ಚೂರು
ಕೆಂಡವಾಗಿದೆ.

0 ಹೀಗಂತಾರೆ:
ಒಂದು ಕಮೆಂಟನ್ನು ಪೋಸ್ಟ್ ಮಾಡಿ